ನನ್ನಪ್ಪ (ಎಲ್ಲವನ್ನೂ ಕೊಟ್ಟು ಏನನ್ನು ಪಡೆಯದೇ ಹೋದವನು)
ರಚನೆ : ಸುನಿಲ್ ನಾಗರಾಜ್
----------------------------------
ಅಜ್ಜನ ಹಳೇ ಅಂಗಿಯೇ ಅವನ ಬಾಲ್ಯದ ಪ್ಯಾಂಟು ಶರ್ಟು ಶಾಲೆಯ ಮೆಟ್ಟಿಲುಗಳ ಮೇಲೆ ಎಂದೂ ಬೀಳದ ಅವನ ಪಾದದ ಪ್ರಿಂಟು ಎಲ್ಲರಂತೆ ತಾನೂ ಬದುಕಬೇಕೆಂಬ ಆತನ ಆಸೆಗಳ ಗಂಟು ಮೂಟೆ ಕಟ್ಟಿ ಎದೆಯ ಅಟ್ಟದ ಮೇಲೆ ಉಳಿಯುವಂತೆ ಮಾಡಿತ್ತು ಅವನನ್ನು ಬಿಡದ ಬಡತನದ ನಂಟು ಹಸಿವನ್ನು ಸಹಿಸದವನಾದರು ಸ್ವಾಭಿಮಾನವ ಎಂದೂ ಬಿಟ್ಟವನಲ್ಲ ಹೇಳಿಕೆ ಮಾತುಗಳಿಗೆ ಯಾವತ್ತೂ ಕಿವಿಕೊಟ್ಟವನೂ ಅಲ್ಲ ಪರರ ಏಳಿಗೆಯ ಕಂಡು ಎಂದೂ ಅಸೂಯೆ ಪಟ್ಟವನಲ್ಲ ಒಣಜಂಬಕ್ಕೊ,ತೋರಿಕೆಯ ಬದುಕಿಗೊ ಎಂದೂ ಒಳಗಾದವನೂ ಅಲ್ಲ ಮಕ್ಕಳಿಗಾಗಿ ಆಸ್ತಿ ಮಾಡಬೇಕೆಂದುಕೊಂಡವಲ್ಲ ಮಕ್ಕಳನ್ನೇ ಆಸ್ತಿ ಮಾಡಬೇಕೆಂದುಕೊಂಡವನು ಹಣಕ್ಕೆ ಆಸೆಪಟ್ಟವನಲ್ಲ ಗುಣಕ್ಕೆ ಬೆಲೆಕೊಟ್ಟವನು ಅದೃಷ್ಟಕ್ಕೆ ಕಾದುಕುಳಿತವನಲ್ಲ ಕಾಯಕದಲ್ಲಿ ನಂಬಿಕೆ ಇಟ್ಟವನು ಸಂಪತ್ತಿನಲ್ಲಿ ಸಿರಿವಂತನಲ್ಲ ನನ್ನಪ್ಪ ಸರಳತೆಯ ಸಾಹುಕಾರನವನು ನನ್ನಪ್ಪ ಸರಳತೆಯ ಸಾಹುಕಾರನವನು....
----------------------------------
ನೋಂದಣಿ ಐಡಿ : KPF-S1-5244