ಸಮುದ್ರ
ರಚನೆ : ಆಕಾಶ್ ಪಾಟೀಲ್
----------------------------------
ಅಲೆಯೇ ನೀ ನೀಲಿ ಸಖಿಯೇ ಜಿಗಿಯುತ್ತಿರುವೆ ಗಾಳಿಯಿಂದ, ಬಳುಕುತ್ತಿರುವೆ ತೀರದಿಂದ.. ನೀ ಒಂದು ಮಾಯೇ ಕೈಗೆಟುಕದ ಛಾಯೇ ಝೆಂಕರಿಸುವೆ ದರ್ಪದಿಂದ, ಭೋರ್ಗರಿಸುವೆ ಅದೂಷ್ಯದಿಂದ.. ಅಂಬರ ಕೊಟ್ಟ ಬಣ್ಣ ನಿನ್ನ ಗುರುತಾದರೂ ನೀ ಕೊಟ್ಟ ಬಣ್ಣವೇ ವಸುಧೆಯ ಗುರುತು.. ತರಂಗಿಣಿಯ ಬೆಸುಗೆಯೆ ನಿನ್ನ ಗುರುತಾದರೂ ನೀ ಕೊಟ್ಟ ಆಧಾರವೇ ಜೀವಾತ್ಮದ ಗುರುತು.. ಸುಡುವ ಇಳಿರಾಯನಿಗೆ ನಿನ್ನೀ ಒಡಲೆ ತವರು, ಮಂದಿಯ ಬದುಕಿನ ಆಸರೆಯೇ ನೀನು ಮುನ್ನೀರು.. ನಗುವ ಚಂದಮಾಮನಿಗೆ ನಿನ್ನೀ ಮಡಿಲೆ ಅಮಲು, ಜಗದ ಬೆರಗುಗಳ ತಾಣವೇ ನೀನು ಕಡಲು.. ಶರಧಿಯೆ ನೀ ನೀಲಿ ಸಖಿಯೆ.. ಜಲಧಿಯೆ ನೀ ಒಂದು ಮಾಯೆ ಕೈಗೆಟುಕದ ಛಾಯೆ..
----------------------------------
ನೋಂದಣಿ ಐಡಿ : KPF-S1-5481